ಕಟೀಲು : ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲ್ಲೂಕಿನ ಒಂದು ಗ್ರಾಮ. ಮಂಗಳೂರಿನ ಪುರ್ವಕ್ಕೆ 27ಕಿಮೀ ದೂರದಲ್ಲಿ ಕಿನ್ನಿಗೋಳಿಗೆ ಹೋಗುವ ರಸ್ತೆ ಬದಿಯಲ್ಲಿದೆ. ಇದು ದಕ್ಷಿಣಕನ್ನಡದ ಪ್ರಸಿದ್ಧ ತೀರ್ಥಕ್ಷೆತ್ರಗಳಲ್ಲಿ ಒಂದು. ನಂದಿನಿ ನದಿಯ ಎರಡು ಕವಲು
ಗಳ ಮಧ್ಯೆ ಬಂಡೆಗಳ ನಡುವೆ ಇರುವ ಉದ್ಭವ ಲಿಂಗದ ಆಕಾರದ ಮೂರ್ತಿಯನ್ನು ದುರ್ಗಾಪರಮೇಶ್ವರಿ ಎಂದು ಪುಜಿಸುವರು. ನದಿಯ ಮಧ್ಯಭಾಗದಲ್ಲಿ ಅಂದರೆ ಕಟಿ ಪ್ರದೇಶದಲ್ಲಿ ಈ ಪವಿತ್ರ ಸ್ಥಳ ಇರುವುದರಿಂದ ಇದಕ್ಕೆ ಕಟೀಲು ಎಂಬ ಹೆಸರು ಬಂದಿರಬಹುದು. ಅಲ್ಲದೆ ಈ ದೇವಿಗೆ ಕಟಿಳಾ ಎಂಬ ಹೆಸರೂ ಇರುವುದರಿಂದ ಗ್ರಾಮದ ಹೆಸರು ರೂಪುಗೊಂಡಿರಬೇಕು. ಅಸ್ರಣ್ಣ ಉಪನಾಮದ ಮಾಧ್ವ ವೈಷ್ಣವ ಕುಟುಂಬದವರು ಇಲ್ಲಿನ ಅರ್ಚನೆ ಹಾಗೂ ಆಡಳಿತ ನೋಡುತ್ತ ಬಂದಿದ್ದಾರೆ. ಹಿಂದಿನ ದೇವಾಲಯ ಪ್ರವಾಹದಿಂದ ಕೊಚ್ಚಿಹೋದ ಕಾರಣ ಈಗ ಇರುವ ವಿಸ್ತಾರವಾದ ದೇವಸ್ಥಾನದ ಕಟ್ಟಡವನ್ನು 1944ರಲ್ಲಿ ಕಟ್ಟಲಾಗಿದೆ. ಕಲ್ಲಿನ ಕಂಬಗಳ ಮೇಲೆ ಕುಸುರಿ ಕೆಲಸದ ಪ್ರತಿಮೆಗಳಿವೆ. ಈ ದೇವಾಲಯ ನದಿಯ ಮಧ್ಯದ ದಿಬ್ಬದ ಮೇಲಿದ್ದು ಗೋಪುರಗಳನ್ನು ಹೊಂದಿದೆ. ಕಾರ್ಕಳದ ಶಿಲ್ಪಿ ರಂಜಾಳ ಗೋಪಾಲ ಕೃಷ್ಣ ಶೆಣೈ ಈ ದೇವಾಲಯದ ಶಿಲ್ಪಗಳನ್ನು ಕೆತ್ತಿದ್ದಾರೆ.

ಸ್ಥಳಪುರಾಣದಂತೆ ಇಲ್ಲಿಂದ 3ಕಿಮೀ ದೂರದ ಎಕ್ಕಾರು ಗ್ರಾಮದಲ್ಲಿ ಇದ್ದ ಬ್ರಹ್ಮನ ವರ ಪಡೆದ ಅರುಣಾಸುರನೆಂಬ ದೈತ್ಯನನ್ನು ದೇವಿಯು ಬೃಹದಾಕಾರದ ಭ್ರಮರ ರೂಪದಿಂದ ಬಂದು ಕೊಂದು, ಭಕ್ತರ ಪ್ರಾರ್ಥನೆಯಂತೆ ದುರ್ಗಾ ರೂಪದಲ್ಲಿ ನೆಲೆನಿಂತಿದ್ದಾಳೆ. ದಿನವÆ ರಾಜಮರ್ಯಾದೆಗಳೊಡನೆ ಬಲಿ ಮೂರ್ತಿಯನ್ನು ದೇವಸ್ಥಾನದ ಆವರಣದಲ್ಲಿ ಮೆರೆಸುತ್ತಾರೆ. ಅನಂತರ ದೇವಿಯನ್ನು ಹೊತ್ತವರಿಂದ ಪ್ರಸಾದ ವಿನಿಯೋಗ. ಕೊನೆಗೆ (ದರ್ಪಣ) ವಸಂತ ಮಂಟಪದಲ್ಲಿ ದೇವಿಯನ್ನು ಕೂರಿಸಿ, ಅನೇಕ ಬಗೆಯಲ್ಲಿ ಪುಜಿಸುತ್ತಾರೆ. ಗುಡಿ ಪ್ರವೇಶಿಸುವಾಗ ಪುಟ್ಟ ಗುಡಿಯಿರುವ ರಕ್ತೇಶ್ವರಿಕಲ್ಲು, ಒಳಗೆ ಗಣಪತಿ, ನಾಗರುಗಳಿವೆ. ಜಾತ್ರೆಯ ಸಮಯದಲ್ಲಿ ಹತ್ತಿರದ ಶಿಬರೂರು ಗ್ರಾಮದ ಕೊಡಮಣಿತ್ತಾಯ ಭೂತಕ್ಕೂ ಇಲ್ಲಿ ಮನ್ನಣೆಯಿದೆ.

ದೇವಸ್ಥಾನದಲ್ಲಿ ನಿತ್ಯ ಅನ್ನದಾನ ಸೇವೆಯಿರುತ್ತದೆ. ದೇವಸ್ಥಾನ ಮಂಡಳಿಯು ಪ್ರಾಥಮಿಕ ಶಾಲೆಯಿಂದ ಪದವಿ ಕಾಲೇಜಿನವರೆಗೆ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತದೆ. ಪ್ರಧಾನವಾಗಿ ದೇವಿಯ ಆರಾಧನೆಯ ರೂಪವಾಗಿ ಮೂರು ಯಕ್ಷಗಾನ ಮೇಳಗಳನ್ನು ನಡೆಸುತ್ತಿದೆ. ಮೇಳದವರು ಆಟ ನಡೆಸುವ ಊರಿನಲ್ಲಿ ಬೆಳಗ್ಗೆ ತಮ್ಮಲ್ಲಿನ ರಾಮಲಕ್ಷ್ಮಣರ ಕಿರೀಟಗಳಿಗೆ ಪುಜೆ ಮಾಡುತ್ತಾರೆ. ಈ ಪುಜೆ ಪ್ರಸಾದಕ್ಕೆ ಕಟೀಲಿನ ಪ್ರಸಾದದಂತೆಯೆ ಮನ್ನಣೆ ಇದ್ದು, ಭಕ್ತಾದಿಗಳು ಹರಕೆ ತೀರಿಸುವುದೂ ಉಂಟೂ. ಈ ಮೇಳದವರು ಕಟೀಲಿನಲ್ಲಿ ದೇವೀಮಹಾತ್ಮೆ, ಕಟೀಲು ಕ್ಷೇತ್ರ ಮಹಾತ್ಮೆ ಆಡುವಂತಿಲ್ಲ. ಇಲ್ಲಿ ಜಾಗ್ರತದೈವ ಎಂಬ ದೇವರಿದೆ. ಪ್ರತಿ 12 ವರ್ಷಕ್ಕೆ ಒಮ್ಮೆ ಬ್ರಹ್ಮಕಳಶ ನಡೆಯುತ್ತದೆ. ಮಂಗಳೂರು ವಿಶ್ವವಿದ್ಯಾಲಯದ ಸಂಸ್ಕೃತ ಸ್ನಾತಕೋತ್ತರ ಕೇಂದ್ರ ಇಲ್ಲಿದೆ.	(ಎಚ್.ಪಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ